ವೆಸ್ಟ್‍ಇಂಡಿಸ್
	ಅಟ್ಲಾಂಟಿಕ್ ಸಾಗರ ಮತ್ತು ಕೆರಿಬಿಯನ್ ಸಮುದ್ರದ ನಡುವಿರುವ ದ್ವೀಪ ಸಮೂಹ. ಅಮೆರಿಕ ಸಂಯುಕ್ತ ಸಂಸ್ಥಾನದ ಆಗ್ನೇಯದಲ್ಲಿರುವ ಫ್ಲಾರಿಡ ರಾಜ್ಯದಿಂದ ದಕ್ಷಿಣ ಅಮೆರಿಕದ ವೆನಿಜóೂಲದವರೆಗೆ ಉತ್ತರ ಅಟ್ಲಾಂಟಿಕ್ ಸಾಗರದ ದಕ್ಷಿಣದಲ್ಲಿ ಹಾಗೂ ಉತ್ತರ ಅಮೆರಿಕದ ಆಗ್ನೇಯದಲ್ಲಿ ದಕ್ಷಿಣ ಅಮೆರಿಕದ ಉತ್ತರದಲ್ಲಿ ಕುಡುಗೋಲಿನಾಕಾರದಲ್ಲಿ ಹಬ್ಬಿದೆ.  ಇಲ್ಲಿನ ನಲವತ್ತು ದ್ವೀಪಗಳಲ್ಲಿ ಜನವಸತಿಯಿದೆ. ಈ ದ್ವೀಪ ಕೆರಿಬಿಯನ್ ಸಮುದ್ರದಲ್ಲಿರುವುದರಿಂದ ಮತ್ತು ಇಲ್ಲಿಯ ಆದಿವಾಸಿ ಗುಂಪಿನ ಹೆಸರಿನಿಂದ ಇದನ್ನು ಕೆರಿಬಿಯನ್ ದ್ವೀಪಗಳೆಂದೂ ಕರೆಯುತ್ತಾರೆ. ಈ ದ್ವೀಪಸ್ತೋಮ ಉ.ಅ.5ಲಿ-30ಲಿ ಮತ್ತು ಪ.ಅ. 73ಲಿ-83ಲಿ ನಡುವೆ ಇದೆ. ಇವುಗಳ ಒಟ್ಟು ವಿಸ್ತಿರ್ಣ 2,38,760 ಚ.ಕಿಮೀ. ಈ ದ್ವೀಪಸ್ತೋಮ ಸು. 4,020 ಕಿಮೀ ಉದ್ದವಾಗಿದೆ. ಹಿಂದೆ ಇಲ್ಲಿ ವಿಶಾಲ ಭೂಪ್ರದೇಶವಿತ್ತೆಂದೂ ಅದು ಅಟ್ಲಾಂಟಿಕ್ ಸಾಗರವನ್ನು ಕೆರಿಬಿಯನ್ ಸಮುದ್ರದಿಂದ ಪ್ರತ್ಯೇಕಿಸುತ್ತಿತ್ತೆಂದೂ ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಅವರು ಆಂಟೆಲಿಯ ಎಂದು ಕರೆದರು. ಈಗ ಬಹುಭಾಗ ಸಮುದ್ರದಲ್ಲಿ ಮುಳುಗಿಹೋಗಿದೆ. ಈಗ ಉಳಿದಿರುವ ಸಮುದ್ರದ ಮೇಲೆ ಕಾಣಿಸುವ ಭಾಗಗಳು ಈ ದ್ವೀಪಗಳಾಗಿವೆ. ಅವು 1. ಮಹಾ ಆಂಟಿಲಿಸ್ 2. ಬಹಾಮಸ್ ಮತ್ತು ಕಿರು ಆಂಟಿಲಿಸ್ ಮತ್ತು 3. ಟ್ರಿನಿಡಾಡ್ ಅಥವಾ ವೆನಿಜೂಲ ದ್ವೀಪಸ್ತೋಮ. ಮಹಾ ಆಂಟಿಲಿಸ್ ದ್ವೀಪ ಸ್ತೋಮದಲ್ಲಿ ಕ್ಯೂಬ, ಜಮೇಕ, ಹೈಟಿ, ಡೊಮಿನಿಕನ್ ಗಣರಾಜ್ಯ ಮತ್ತು ಪೋರ್ಟರಿಕೊ ದೇಶಗಳು ಇವೆ. ಬಹಾಮಸ್ ಮತ್ತು ಕಿರು ಆಂಟಿಲಿಸ್‍ಗಳಲ್ಲಿ ಲೀವರ್ಡ್ ದ್ವೀಪಗಳು, ವಿಂಡ್‍ವರ್ಡ್ ದ್ವೀಪಗಳು, ಟೊಬಾಗೋ ಮತ್ತು ಬಾರ್ಬೊಡಾಸ್ ದ್ವೀಪಗಳಿವೆ. ವೆನಿಜóೂಲ ದ್ವೀಪಸ್ತೋಮ ಟ್ರಿನಿಡಾಡ್ ಮತ್ತು ಇತರೆ ಸಣ್ಣಪುಟ್ಟ ದ್ವೀಪಗಳನ್ನು ಒಳಗೊಂಡಿದೆ.

	ಈ ದ್ವೀಪ ಸ್ತೋಮಗಳಲ್ಲಿ 1600ರಿಂದ ಸಂಭವಿಸಿದ ಭೂಕಂಪ ಮತ್ತು ಜ್ವಾಲಾಮುಖಿಗಳಿಂದ ಹಾನಿಯುಂಟಾಗಿದೆ. 1902ರ ಭೂಕಂಪ ಮತ್ತು ಜ್ವಾಲಾಮುಖಿ ಕಾರ್ಯಾಚರಣೆಯಿಂದ ಪೋರ್ಟ್‍ರಾಯನ್‍ನ ಕೆಲವು ತೀರಪ್ರದೇಶಗಳು ಸಮುದ್ರದೊಳಗೆ ಮುಳುಗಿದವು. 1907ರಲ್ಲಿ ಕಿಂಗ್‍ಸ್ಟನ್ ಪ್ರದೇಶವೂ ಬೆಂಕಿ ಮತ್ತು ಚಂಡಮಾರುತಗಳಿಂದ ಹಾನಿಗೊಂಡಿತು. 1842ರಲ್ಲಿ ಹೈಟಿ, 1852ರಲ್ಲಿ ಸಾಂತಿಗೋ, ಗುವಾಂಟ ನಮೋ ಮತ್ತು ಕ್ಯೂಬ, 1918ರಲ್ಲಿ ಮಾಯಗುಜ್ ಮತ್ತು ಅಕ್ವಾಡಿಲ, ಪೋರ್ಟರಿಕೊ, 1946ರಲ್ಲಿ ಸಾಂತಿಗೋ ಡೊಮೆನಿಕನ್ ಗಣರಾಜ್ಯ ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಂಡವು. ಜೊತೆಗೆ ಸಾಗರತಳದ ಜ್ವಾಲಾಮುಖಿಗಳು ಪ್ರತಿ ಹತ್ತು ವರ್ಷಕ್ಕೊಮ್ಮೆ ಎರಡು ಮೂರು ಬಾರಿ ಜೀವಂತವಾಗುತ್ತವೆ. ಚಂಡಮಾರುತಗಳೂ ಆಗಾಗ ಹಾವಳಿ ನಡೆಸಿವೆ.

	ವಾಯುಗುಣ: ವೆಸ್ಟ್‍ಇಂಡಿಸ್ ದ್ವೀಪಗಳದ್ದು ಉಷ್ಣ ವಲಯದ ಸಾಗರಿಕ ವಾಯುಗುಣ ಬೇಸಗೆಯಲ್ಲಿ 27ಲಿ-28ಲಿಸೆ. ಮತ್ತು ಚಳಿಗಾಲದಲ್ಲಿ 24ಲಿಸೆ. ಉಷ್ಣಾಂಶ ಇರುತ್ತದೆ. ಈಶಾನ್ಯ ಮತ್ತು ಆಗ್ನೇಯ ವಾಣಿಜ್ಯ ಮಾರುತಗಳು ಇಲ್ಲಿನ ಮಳೆ ಮತ್ತು ಉಷ್ಣತೆಯನ್ನು ನಿಯಂತ್ರಿಸುತ್ತವೆ. ವಾರ್ಷಿಕ ಸರಾಸರಿ ಮಳೆ 100 ಸೆಂ.ಮೀ. ಕೆಲವುಕಡೆ 200 ಸೆಂ.ಮೀ.ಗಿಂತ ಅಧಿಕ ಮಳೆ ಬರುವುದುಂಟು. ಈ ದ್ವೀಪಗಳು ಚಂಡಮಾರುತಗಳ ವಲಯದಲ್ಲಿರುವುದರಿಂದ ಜೂನ್‍ನಿಂದ ನವೆಂಬರ್ ತಿಂಗಳ ಕೊನೆಯವರೆಗೆ ಚಂಡಮಾರುತ ಬೀಸುವುದುಂಟು. ಆ ಕಾಲದಲ್ಲಿ ಮುಂಜಾಗ್ರತೆಯಾಗಿ ಆಹಾರಧಾನ್ಯ ಸಂಗ್ರಹಿಸಿಕೊಂಡು ಆ ಜನ ಮನೆ ಒಳಗೆ ರಕ್ಷಣೆ ಪಡೆಯುತ್ತಾರೆ.

	ಸಸ್ಯವರ್ಗ: ಮಹಾ ಆಂಟಿಲಿಸ್ ಮತ್ತು ಪೂರ್ವದ ಕೆರಿಬಿಯನ್ ದ್ವೀಪಗಳಲ್ಲಿ ಉಷ್ಣವಲಯದ ದಟ್ಟ ಅರಣ್ಯಗಳು ಇವೆ. ಉಷ್ಣವಲಯದ ಸವನ್ನಾ ಮಾದರಿಯ ಸಸ್ಯವರ್ಗ ಕ್ಯೂಬ, ಹಿಸ್‍ಪಾನಿಯೋಲ, ಪೋರ್ಟರಿಕೊ ಮತ್ತು ಟ್ರಿನಿಡಾಡ್‍ಗಳಲ್ಲಿದೆ. ಈ ಅರಣ್ಯಗಳಲ್ಲಿ ಮಹಾಗನಿ, ಸೀಡರ್, ಗ್ರೀನ್‍ಹಾರ್ಲ್, ರಬ್ಬರ್, ಬ್ರೆಜಿಲ್‍ನಟ್, ಸಿಲ್ಕ್‍ಕಾರ್ಟ್, ರೋಸ್‍ವುಡ್, ಬಿದಿರು ಮುಂತಾದ ಮರಗಳು ಇವೆ. ತೆಂಗು ಮತ್ತು ತಾಳೆ ಮರಗಳನ್ನು ಎಣ್ಣೆಗೋಸ್ಕರ ಬೆಳೆಯಲಾಗುತ್ತದೆ.

	ಪ್ರಾಣಿವರ್ಗ: ಮೊಸಳೆ, ಹಾವು ಮತ್ತು ಹಲ್ಲಿ ಜಾತಿಗೆ ಸೇರಿದ ಪ್ರಾಣಿಗಳು ಮತ್ತು ವಿವಿಧ ರೀತಿಯ ಕೋತಿಗಳು ಇಲ್ಲಿ ಹೆಚ್ಚಾಗಿವೆ. ಬಗೆಬಗೆಯ ಪಕ್ಷಿ, ಕೀಟಗಳು, ಮೀನುಗಳು ಇವೆ.

	ಆರ್ಥಿಕತೆ: ಡೊಮೆನಿಕ, ಹೈಟಿ, ಸೆಂಟ್‍ವಿನ್‍ಸೆಂಟ್ ಮತ್ತು ಕ್ಯೂಬ ದ್ವೀಪಗಳಲ್ಲಿ ವ್ಯವಸಾಯ ಪ್ರಧಾನ. ಕಬ್ಬು ಮುಖ್ಯವಾದ ಆರ್ಥಿಕ ಬೆಳೆ. ವಾರ್ಷಿಕ 1 ಕೋಟಿ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಪ್ರಪಂಚದ ಒಟ್ಟು ಸಕ್ಕರೆ ಉತ್ಪಾದನೆಯ ಸೇ.7ರಷ್ಟು ಕ್ಯೂಬದಿಂದ ಬರುತ್ತದೆ. ಆದ್ದರಿಂದ ಕ್ಯೂಬವನ್ನು ಪ್ರಪಂಚದ “ಸಕ್ಕರೆಯ ಪಾತ್ರೆ” ಎಂದು ಕರೆಯುತ್ತಾರೆ. ಉಪೋತ್ಪನ್ನವಾಗಿ ಮದ್ಯವನ್ನು ಹೆಚ್ಚಾಗಿ (ರಮ್ಮನ್ನು) ತಯಾರಿಸಲಾಗುತ್ತದೆ.

	ಜಮೇಕ, ಫ್ರೆಂಚ್‍ವೆಸ್ಟ್‍ಇಂಡಿಸ್ ಮತ್ತು ವಿಂಡ್‍ವರ್ಡ್ ದ್ವೀಪಗಳಲ್ಲಿ ಬಾಳೆಹಣ್ಣನ್ನೂ ಹೈಟಿ, ಡೊಮೆನಿಕ ಗಣರಾಜ್ಯ ಮತ್ತು ಜಮೇಕಗಳಲ್ಲಿ ಕಾಫಿಯನ್ನೂ, ಕ್ಯೂಬ, ಬಹಾಮಾಸ್, ಜಮೇಕ, ಟ್ರಿನಿಡಾಡ್, ಟೊಬಾಗೊ ಮತ್ತು ಡೊಮೆನಿಕಗಳಲ್ಲಿ ನಿಂಬೆಯನ್ನೂ ಹೆಚ್ಚಾಗಿ ಬೆಳೆಯುತ್ತಾರೆ. ಕ್ಯೂಬ ದ್ವೀಪದಲ್ಲಿ ಬತ್ತವನ್ನು ಬೆಳೆಯುತ್ತಾರೆ. ಹೊಗೆಸೊಪ್ಪು, ತೆಂಗು, ಅನಾನಸ್ ಮತ್ತು ಪಿಮೆಂಟೋ ಇತರ ಬೆಳೆಗಳು. ಕ್ಯೂಬ, ಡೊಮೆನಿಕನ್ ಗಣರಾಜ್ಯ, ಪೋರ್ಟರಿಕೊಗಳಲ್ಲಿ ಪಶುಪಾಲನೆ ಒಂದು ಮುಖ್ಯ ಕಸಬು. ಸಾಗರಿಕ ಮತ್ತು ಸಿಹಿನೀರಿನ ಮೀನುಗಾರಿಕೆ ಎಲ್ಲ ದ್ವೀಪಗಳಲ್ಲಿ ಸಾಮಾನ್ಯ. ಹಾರುವ ಮೀನು, ಡಾಲ್ಫಿನ್, ಕಿಂಗ್‍ಫಿಶ್, ಶಾರ್ಕ್ ಮುಂತಾದವುಗಳ ರಫ್ತಿನಿಂದ ಹೆಚ್ಚು ವಿದೇಶಿ ವಿನಿಮಯ ದೊರಕುತ್ತಿದೆ.

	ಪ್ರವಾಸೋದ್ಯಮದಿಂದಲೂ ವಿದೇಶಿ ಹಣ ಸಂಪಾದನೆಯಾಗುತ್ತದೆ. ಈ ದ್ವೀಪಗಳಿಗೆ ಡಿಸೆಂಬರ್-ಮಾರ್ಚ್ ತಿಂಗಳಲ್ಲಿ ಪ್ರವಾಸ ಅನುಕೂಲಕರ ವಾದುದು. ದೇಶದ ರಾಷ್ಟ್ರೀಯ ವರಮಾನದ ಸೇ.40ರಷ್ಟು ಪ್ರವಾಸೋದ್ಯ ಮದಿಂದ ಬರುವುದು. ಈ ದ್ವೀಪಗಳಲ್ಲಿ ಅನೇಕ ಖನಿಜ ಸಂಪನ್ಮೂಲ ಗಳಿವೆ. ಜಮೇಕದಲ್ಲಿ ಬಾಕ್ಸೈಟ್; ಟ್ರಿನಿಡಾಡ್, ಬಾರ್ಬೊಡಾಸ್, ಕ್ಯೂಬದಲ್ಲಿ ಎಣ್ಣೆ ಮತ್ತು ನೈಸರ್ಗಿಕ ಅನಿಲ; ಕ್ಯೂಬ ಮತ್ತು ಡೊಮೆನಿಕನ್ ಗಣರಾಜ್ಯದಲ್ಲಿ ವಜ್ರ, ಚಿನ್ನ, ಬೆಳ್ಳಿ ಮುಂತಾದವು ದೊರೆಯುತ್ತವೆ. ಗಣಿಗಾರಿಕೆ, ಕೈಗಾರಿಕೆಗಳಿಗೆ ಇವು ಸಹಾಯಕ. ಎಣ್ಣೆ ಕೈಗಾರಿಕೆಯಿಂದ ದೇಶದ ರಾಷ್ಟ್ರೀಯ ಆದಾಯದ ಸೇ.25 ರಷ್ಟು, ಅಲ್ಯೂಮಿನಿಯಮ್ ಗಣಿಗಾರಿಕೆಯಿಂದ ಸೇ.8ರಷ್ಟು ಸಂಪಾದನೆಯಾಗುತ್ತದೆ. ಯುರೋಪ್, ಆಫ್ರಿಕ, ಏಷ್ಯ ಮತ್ತು ಲ್ಯಾಟಿನ್ ಅಮೆರಿಕಗಳೊಡನೆ ವ್ಯಾಪಾರ ಸಂಪರ್ಕವಿದೆ.

	ಭಾಷೆ, ಧರ್ಮ: ಇಲ್ಲಿಯ ಜನ ಹೆಚ್ಚಾಗಿ ಯುರೋಪಿನ ವಸಾಹತುಶಾಹಿ ಭಾಷೆಗಳನ್ನಾಡುತ್ತಾರೆ. ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಭಾಷೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಸ್ಪ್ಯಾನಿಷ್, ಫ್ರೆಂಚ್, ಡಚ್ ಭಾಷೆಗಳನ್ನು ಆಡುತ್ತಾರೆ. ಇಂಗ್ಲಿಷ್ ಭಾಷೆಯನ್ನು ವಿದ್ಯಾವಂತರು ಮಾತ್ರ ಆಡುತ್ತಾರೆ. ಕ್ರೈಸ್ತ, ಹಿಂದು, ಮುಸ್ಲಿಮ್, ಜೂದಾಯಿಸಮ್ ಮುಂತಾದ ಧರ್ಮಗಳಿವೆ. ಆಸ್ಟ್ರೊ-ಕ್ರಿಯೋಲ್ ಎಂಬ ಸ್ಥಳೀಯ ಧರ್ಮವೂ ಇದೆ.

	ಜೀವನ ಶೈಲಿ: ಕೃಷಿಕರು ಮತ್ತು ತೋಟಗಾರಿಕೆ ಕೆಲಸಗಾರರದು ಕೃಷಿಆಧಾರಿತ ಜೀವನಶೈಲಿ. ಮೀನುಗಾರಿಕೆ ಪ್ರಧಾನ ಉದ್ಯೋಗ. ಅರಣ್ಯ ಪ್ರದೇಶಗಳ ಜನ ಮರಕಡಿಯುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಈಚೆಗೆ ಮರಕಡಿಯುವುದನ್ನು ನಿಷೇಧಿಸಲಾಗಿದೆ. ಇಲ್ಲಿನ ಗ್ರಾಮೀಣ ಜನರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಸೇ.39ರಷ್ಟು ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

	ಇವರ ಉಡುಗೆ ವೈವಿಧ್ಯಮಯ, ಪಾಶ್ಚಾತ್ಯ ಶೈಲಿಯದು. ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ. ಇವರ ಆಹಾರ ಶೈಲಿಯಲ್ಲಿ ವೈವಿಧ್ಯವಿದೆ. ಗೆಡ್ಡೆಗೆಣಸು, ಕ್ಯಾರೆಟ್, ಮರಗೆಣಸು, ಆಲೂಗೆಡ್ಡೆ, ಬಾಳೆಹಣ್ಣು, ಬತ್ತ, ಮುಸುಕಿನ ಜೋಳ ಮುಂತಾದ ಆಹಾರ ಪದಾರ್ಥಗಳನ್ನು ಜನ ಉಪಯೋಗಿಸುತ್ತಾರೆ. ಕುರಿ, ಹಂದಿ, ಮೇಕೆ, ಕೋಳಿ, ದನ ಮತ್ತು ಕೆಲವು ಕಾಡುಪ್ರಾಣಿಗಳ ಮಾಂಸವನ್ನೂ ಸೇವಿಸುತ್ತಾರೆ. ಮೀನು ಇಲ್ಲಿನ ಜನರ ಮುಖ್ಯ ಆಹಾರ. ಕೆಲವು ದ್ವೀಪಗಳಲ್ಲಿ ಇಂಡಿಯ, ಚೀನ ಮತ್ತು ಯುರೋಪ್ ಶೈಲಿಯ ಆಹಾರ ಸೇವಿಸುವುದುಂಟು.

	ಕ್ರೀಡೆ ಮತ್ತು ಮನರಂಜನೆ: ವೆಸ್ಟ್ ಇಂಡಿಸ್‍ನಲ್ಲಿ ಬ್ರಿಟಿಷ್‍ರಿಂದ ಅನಂತರ ಅಮೆರಿಕನ್ನರಿಂದ ಕ್ರೀಡೆ ಪ್ರಚಾರಕ್ಕೆ ಬಂತು. ಕ್ರಿಕೆಟ್, ಕಾಲ್ಚೆಂಡು, ರಗ್ಬಿ, ಟೆನಿಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ನೆಟ್‍ಬಾಲ್, ಹಾಕಿ, ಪೋಲೋ, ಕುದುರೆ ಸವಾರಿ, ಬಾಕ್ಸಿಂಗ್, ಮಲ್ಲಯುದ್ಧ, ಈಜು ಇತ್ಯಾದಿ ಕ್ರೀಡೆಗಳಿವೆ. ಬ್ಯಾಸ್ಕೆಟ್ ಬಾಲ್ ಹಾಗೂ ಕ್ರಿಕೆಟ್ ಇಲ್ಲಿನ ಪ್ರಸಿದ್ಧ ಆಟಗಳು. 1970ರಿಂದೀಚೆಗೆ ಈ ದ್ವೀಪಸ್ತೋಮದಲ್ಲಿ ಪ್ರಪಂಚವಿಖ್ಯಾತ ಆಟಗಾರರು ಕಂಡುಬಂದಿದ್ದಾರೆ. ಅದರಲ್ಲೂ ಕ್ರಿಕೆಟ್ ಕ್ಷೇತ್ರದಲ್ಲಿ ಅನೇಕ ಒಳ್ಳೆಯ ಆಟಗಾರರು ಪ್ರಸಿದ್ಧಿ ಹೊಂದಿದ್ದಾರೆ.

	ಕೋಳಿ ಕಾಳಗ ಹೈಟಿ ದ್ವೀಪದ ದುಡಿಮೆಗಾರ ವರ್ಗದ ಜನರ ಮೆಚ್ಚಿನ ಆಟ. ಇದಲ್ಲದೆ ಮೇಕೆ, ಕತ್ತೆ ಮತ್ತು ಏಡಿ ಪಂದ್ಯಗಳೂ ರಜಾ ದಿನಗಳಲ್ಲಿ ನಡೆಯುವುದುಂಟು. ಆಫ್ರಿಕನ್ ಮೂಲದಿಂದ ಬಂದ ಸಂಗೀತ ಮತ್ತು ಕುಣಿತಗಳು ರೂಢಿಯಲ್ಲಿವೆ. ಇವು ಇಲ್ಲಿನ ತೀರ ಪ್ರದೇಶಗಳ ವಿಹಾರಧಾಮಗಳಲ್ಲಿ ಸಾಮಾನ್ಯ.

	ಸಾರಿಗೆ ಮತ್ತು ಸಂಪರ್ಕ: ಒಂದು ದ್ವೀಪಸ್ತೋಮದಿಂದ ಮತ್ತೊಂದು ದ್ವೀಪಕ್ಕೆ ಅಥವಾ ಇನ್ನೊಂದು ದೇಶಕ್ಕೆ ಹೋಗಬೇಕಾದರೆ ಜಲಮಾರ್ಗ ಅಥವಾ ವಾಯುಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಗ್ರಾಮೀಣ ಜನತೆ ರಸ್ತೆ ಸಾರಿಗೆಗೆ ಕುದುರೆ, ಹೇಸರಗತ್ತೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಬಸ್ಸು, ಕಾರು ಹಾಗೂ ಕೆಲವೆಡೆ ರೈಲುಗಳ ಸಂಚಾರವಿದೆ. ಇದು ಕ್ಯೂಬ ಮತ್ತು ಜಮೇಕಗಳಲ್ಲಿ ಮಾತ್ರ ಇದೆ. ಈ ಎಲ್ಲ ದ್ವೀಪಗಳಲ್ಲಿ ಉಪಗ್ರಹಾಧಾರಿತ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಿವೆ. ಇವು ಅಮೆರಿಕ ಸಂಯುಕ್ತ ಸಂಸ್ಥಾನದ ನಿಯಂತ್ರಣಕ್ಕೆ ಒಳಪಟ್ಟಿವೆ. ಜಮೇಕ, ಗ್ಲೀನರ್, ಬಾರ್ಬೊಡಾಸ್, ಟ್ರಿನಿಡಾಡ್ ಮುಂತಾದ ಕಡೆ ಮಾಸಿಕ, ಸಾಪ್ತಾಹಿಕ ಮತ್ತು ದಿನ ಪತ್ರಿಕೆಗಳು ಪ್ರಸಾರದಲ್ಲಿವೆ.
	ಸರ್ಕಾರ: ಒಂದೊಂದು ದ್ವೀಪ ಅಥವಾ ದ್ವೀಪಸಮೂಹ ಒಂದೊಂದು ಬಗೆಯ ಆಡಳಿತ ವ್ಯವಸ್ಥೆ ಹೊಂದಿವೆ. ಸ್ವತಂತ್ರವಾಗಿ ಯಾವುದೇ ನಿರ್ಧಾರಗಳನ್ನು ಸಾರ್ವತ್ರಿಕವಾಗಿ ತೆಗೆದುಕೊಳ್ಳುವ ಸ್ಥಿತಿ ಇಲ್ಲ. ಕೆಲವು ಅಮೆರಿಕದ ಮತ್ತೆ ಕೆಲವು ಯುರೋಪಿನ ದೇಶಗಳ ನಿಯಂತ್ರಣಕ್ಕೆ ಒಳಪಟ್ಟಿವೆ. 1994ರಲ್ಲಿ ಹೈಟಿ ದ್ವೀಪದಲ್ಲಿ ಒಂದು ಸೇನಾ ತುಕ್ಕಡಿಯನ್ನಿಟ್ಟಿತು. 1994 ಜುಲೈ 24ರಂದು ವೆಸ್ಟ್ ಇಂಡಿಸ್‍ನ 25 ರಾಜ್ಯಗಳು ಕೆರಿಬಿಯನ್ ರಾಜ್ಯಗಳ ಒಕ್ಕೂಟವನ್ನು ಲ್ಯಾಟಿನ್ ಅಮೆರಿಕದ ನೆರವಿನಿಂದ ಸ್ಥಾಪಿಸಿಕೊಂಡು ಪ್ರಪಂಚದ ನಾನಾ ದೇಶಗಳೊಡನೆ ಆರ್ಥಿಕ ಸಂಬಂಧ ಬೆಳೆಸುತ್ತಿವೆ.

	ಇತಿಹಾಸ: ಯುರೋಪಿನ ಕ್ರಿಸ್ಟೋಫರ್ ಕೊಲಂಬಸ್ 1542ರಲ್ಲಿ ಭಾರತಕ್ಕೆ ಹೊಸಮಾರ್ಗದ ಅನ್ವೇಷಣೆಯಲ್ಲಿ ಈ ದ್ವೀಪಸಮೂಹಕ್ಕೆ ಬಂದು ತಲಪಿದ. ಇದು ಭಾರತ ಬಳಿಯ ಇಂಡಿಸ್ ದ್ವೀಪಸ್ತೋಮ ಎಂದು ಭಾವಿಸಿದ್ದು ವೆಸ್ಟ್ ಇಂಡಿಸ್ (ಪಶ್ಚಿಮ ಇಂಡಿಸ್) ಎನಿಸಿಕೊಂಡಿತು. ಈತ ಈ ದ್ವೀಪಕ್ಕೆ ಬರುವ ಮುಂಚೆಯೇ ಇಲ್ಲಿ ಜನವಸತಿ ಇತ್ತು. ಇಲ್ಲಿಯ ಜನ ವಿವಿಧ ಬುಡಕಟ್ಟುಗಳಿಗೆ ಸೇರಿದವರಾಗಿದ್ದರು. ಮುಂದೆ ಇಂಗ್ಲಿಷ್, ಫ್ರೆಂಚ್ ಮತ್ತು ಡಚ್ಚರು ಇಲ್ಲಿ ನೆಲಸಿದರು. 1600ರಲ್ಲಿ ಆಫ್ರಿಕದ ಕಪ್ಪು ಜನರನ್ನು ಇಲ್ಲಿಯ ಕಬ್ಬಿನ ವ್ಯವಸಾಯಕ್ಕಾಗಿ ತಂದರು. ಸು. 5000 ವರ್ಷಗಳಿಂದಲೂ ಜನವಸತಿ ಹೊಂದಿರುವ ಈ ದ್ವೀಪಸ್ತೋಮಕ್ಕೆ 1800ರ ವೇಳೆಗೆ ಸು. 50,000 ಜನ ಇಂಡಿಯ, ಚೀನ ಮತ್ತು ಪಾಕಿಸ್ತಾನದಿಂದ ಬಂದು ನೆಲೆಸಿದರು. 1900ರ ವೇಳೆಗೆ ಕೆಲವು ಅರಬ್ಬರು ಬಂದು ನೆಲೆಸಿದರು.									
	(ಡಿ.ಎಮ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ